ಮಂಜುಶ್ರೀ -
	ಮಹಾಯಾನಪಂಥದ ದಿವ್ಯಬೋಧಿಸತ್ತ್ವರಲ್ಲಿ ಒಬ್ಬ. ಮಂಜು ಎಂದರೆ ರುಚಿಯಾದದ್ದು. ಶ್ರೀ ಎಂಬುದು ವೈಭವಸೂಚಿ ಪದ ಈತನಿಗೆ ಮಂಜುಘೋಷನೆಂಬ ಹೆಸರು ಇದೆ. ಲೋಕೋತ್ತರ ಮೂರ್ತಿಯಾದ ಈತನನ್ನು ಕುಮಾರ ಭೂತನೆಂದು ಬಣ್ಣಿಸುತ್ತಾರೆ. ಪಟ್ಟಾಭಿಷಕ್ತನಾದ ಕುಮಾರನೆಂದು ಅರ್ಥ. ಎಂದರೆ ತಾನಿನ್ನೂ ಬೋದಿಸತ್ತ್ವನಾಗಿಯೇ ಇದ್ದರೂ ಸ್ವಯಂ ಬುದ್ದನಿಂದ ಯೌವ ರಾಜ್ಯದಲ್ಲಿ ಪಟ್ಟಭದ್ರನೆಂದು ಕಲ್ಪನೆ ಎಂದರೆ ದೇವತೆಗಳ ಗಡಣದಲ್ಲಿ ಇವರಿಗೆ ಬುದ್ದನಷ್ಟೇ ಗೌರವ. ಬೋದಿಸತ್ತ್ವರ ಅಂತರಾಳದಲ್ಲಿರುವ ಭಾವಿ ಬುದ್ದತ್ವವೇ ಮಂಜುಶ್ರೀ. ಲೋಕಸಂಗ್ರಹದ ದೀಕ್ಷೆ ತಳೆದು ಬೋದಿಸತ್ತ್ವನಾಗಿಯೇ ಉಳಿದಿದ್ದರೂ ಬೌದ್ಧರ ಹೃದಯದಲ್ಲಿ ಜೀವಂತ ಬುದ್ದನಂತೆ ನಿಂತಿರುವ ಮಂಜುಶ್ರೀಯನ್ನು ಬಲಗೈಯಲ್ಲಿ ಕತ್ತಿಯನ್ನೂ (ಅe್ಞÁನವನ್ನು ಕತ್ತರಿಸುವ e್ಞÁನದ ಸಂಕೇತ) ಎಡಗೈಯಲ್ಲಿ ಪುಸ್ತಕವನ್ನು (ಧರ್ಮಸಂಕೇತ) ಹಿಡಿದಿರುವಂತೆ ಚಿತ್ರಿಸಲಾಗಿದೆ. ಸಾಮಾನ್ಯವಾಗಿ ಮಂಜುಶ್ರೀ ಸತ್ತ್ವಪ್ರಧಾನವಾದ ಶಾಂತವರಪ್ರಧಾನಮೂರ್ತಿ. ದರೆ ಟಿಬೆಟ್‍ನಲ್ಲಿ ಈತನನ್ನು ರಾಜನ ಪ್ರಧಾನ ಲೀಲಾಮೂರ್ತಿಯೆಂದು ಪರಿಗಣಿಸಲಾಗಿದೆ.

	ಹಲವಾರು ಮಹಾಯಾನಸೂತ್ರಗಳಲ್ಲಿ ಮಂಜುಶ್ರೀ ಬೌದ್ಧಮತ ಪ್ರಚಾರಕ್ಕೆ ಶ್ರಮಿಸಿದ ಬೋಧಿಸತ್ತ್ವನಂತೆ ರೂಪಗೊಂಡಿದ್ದಾನೆ. ಏಳನೆಯ ಶತಮಾನದಲ್ಲಿ ಶಿಕ್ಷಾಸಮುಚ್ಚಯ ಬರೆದ ಶಾಂತಿದೇವನಿಗೆ ಯೋಗಿಯ ರೂಪ ಧರಿಸಿ ಬಂದು ಶಾಸ್ತ್ರ ಹೇಳಿಕೊಟ್ಟವ ಮಂಜುಶ್ರೀ ಬೋಧಿಸತ್ತ್ವನೇ ಎನ್ನಲಾಗಿದೆ. ಈತನ ಸಲಹೆಯಂತೆಯೇ ಸುಧನ ಬೋಧಿಗೆ ಅಗತ್ಯವಾದ ಜ್ಞಾನ ಪಡೆಯಲು ಭಾರತ ಭೂಮಿಯನ್ನೆಲ್ಲ ಸುತ್ತಾಡಿದ. ಸಾಧನಮಾಲೆಯಲ್ಲಿ ವಶೀಕರಣ ವಿದ್ಯೆ ಹೇಳುವ ಒಂದು ಸಾಧನ ವಜ್ರಾನಂದನನ್ನು ಮಂಜುಶ್ರೀಯ ಅವತಾರವೆಂದು ನಿರೂಪಿಸುತ್ತದೆ. ಮಂಜುಶ್ರೀ ಪಂಥ ಭಾರತದಿಂದ ಚೀನಾಕ್ಕೆ ಹೋದಾಗ ಅಲ್ಲಿ ತುಂಬ ಪ್ರಚಲಿತವಾಯಿತು. ಅಲ್ಲಿಂದಲ್ಲೇ ಅದು ನೇಪಾಳ ಮುಟ್ಟಿದ್ದು.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ